ಕನ್ನಡ ಪ್ರೀತಿ ಮತ್ತು ಹಿಂದಿ ಹೇರಿಕೆ
ನಮಸ್ಕಾರ ಸ್ನೇಹಿತರೆ, ಕಳೆದ ವಾರದಿಂದ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಈ ಹಿಂದಿ ಹೇರಿಕೆಯ ವಿಷಯ ಮೊದಲಿಗೆ ನನ್ನ ಕಿವಿಗೆ ಬಿದ್ದಾಗ, ನನ್ನನ್ನು ಕಾಡಿದ ಮೊದಲ ಗೊಂದಲಾತೀತಮಯ ಪ್ರಶ್ನೆ, ಏನಾಗ್ತಿದೆ ಈಗ? ಯಾಕೀ ಬದಲಾವಣೆಯ ಬಿರುಗಾಳಿ ಏಕಾಏಕಿ ಸದ್ದು ಮಾಡ್ತಿದೆ? ಅದು ಬಿಟ್ಹಾಕಿ ಹೋಗ್ಲಿ, ಹುಟ್ಟಿದಾಗಿನಿಂದಲೂ ಕನ್ನಡ ಭಾಷೆ ಮಾತನಾಡುತ್ತ ಬೆಳೆದಿರುವ ನನಗೆ ಈ ವಿಷಯದ ಪರವಾಗಿ ನಿಲ್ಲಬೇಕೋ? ವಿರೋಧಿಸಬೇಕೋ? ಅಥವಾ ಎರಡನ್ನು ಬಿಟ್ಟು ಅಲಿಪ್ತನಾಗಿರಬೇಕೋ? ಯಾವುದೂ ಅರಿಯದ ಪರಿಸ್ಥಿತಿ ತಲುಪಿದೆ. ಮೊದಳೆರಡರಲ್ಲಿ ಯಾವುದನ್ನು ಆಯ್ದುಕೊಂಡರೂ, ಇನ್ನೊಂದು ಕಡೆಯವರ ಕೆಂಗಣ್ಣಿಗೆ ಗುರಿಯಾಗುವುದಂತೂ ಖಚಿತ. ತಲೆ-ಬುಡ ಇಲ್ಲದ ಚರ್ಚೆಗಳು, ತೀಕ್ಷ್ಣ ಕಮೆಂಟ್ಸ್ಗಳ ಸುರಿಮಳೆ, ಹನುಮನ ಬಾಲದಂತೆ ಕೊನೆ ಇರದೇ ಬಿಗಿಯುವ ಭಾಷಣಗಳು, ಇತ್ಯಾದಿ,ಇತ್ಯಾದಿ (ಇದಕ್ಕೆ ನಾನೂ ಹೊರತಲ್ಲ.). ಮೂರನೆ ಆಯ್ಕೆ ಅತಿ ಸುಲಭ, ಯಾರ ಭಯವು ಇಲ್ಲ, ಯಾವ ಜಂಜಾಟವೂ ಇಲ್ಲ, ಬಡಿದಾಡೋರು ಬಡಿದಾಡಿಕೊಂಡು ಸಾಯ್ಲಿ, ನಮ್ಮಪ್ಪನ ಮನೆ ಗಂಟ್ ಏನ್ ಹೋಗೋದಿದೆ? ನಾನ್ ಆರಾಮಾಗ್ ಇರ್ತಿನಲ್ಲಪ್ಪ, ಅಯ್ಯೋ ಅಸ್ಟು ಸಾಕ್, ನನ ಮಗಂದ್..
ಈ ತರಹದ ವ್ಯಕ್ತಿತ್ವ, ನೋಟಕ್ಕೆ ತಪ್ಪಲ್ಲದಿದ್ದರೂ, ತಪ್ಪು ಎಂಬ ಭಾವನೆ ನನ್ನ ಮನದಳದಲ್ಲೇಕೊ ಇತ್ತೀಚಿಗೆ ಬಹಳ ಆಳವಾಗಿ ಊರಲು ಶುರು ಮಾಡಿತು. ನಾ ಕಂಡ ಬಹಳಷ್ಟು ಜನ ಈ ಗುಂಪಿಗೆ ಸೇರಿದವರು. ಇದು ಪ್ರಾಯಶಃ ಸತ್ವ ಇರದ ಯಾಂತ್ರಿಕ ಜೀವನವನ್ನು ಸ್ವಚ್ಛಂದವಾಗಿ ನಡೆಸಲು ಅನುವು ಮಾಡಿಕೊಡಬಹುದೇನೋ, ಈ ಆಯ್ಕೆ ಅವರವರ ಸ್ವಾತಂತ್ರಕ್ಕೆ ಬಿಟ್ಟ ವಿಚಾರ, ಆದರೆ ನನ್ನ ದೃಷ್ಠಿಕೋನದಲ್ಲೇಕೋ ಇದು ಸರಿ ಅನಿಸಲಿಲ್ಲ. ಈ ಗುಣ ಯಾರ ಮನೆಯನ್ನೂ ನಾಶ ಮಾಡುವುದಿಲ್ಲವಾದರೂ, ಒಬ್ಬನ ಅಸ್ತಿತ್ವವನ್ನು ಪ್ರಶ್ನೆ ಮಾಡುವುದಂತೂ ನಿಜ ಅನಿಸತೊಡಗಿತು. ಬದುಕು ಇರುವುದು ಯಾಂತ್ರಿಕ ಜೀವನಕ್ಕಾಗಿ ಅಲ್ಲ ಎಂಬ ಸತ್ಯ ಅರಿತ ನನಗೆ ಯಾವುದಾದರು ಒಂದು ಪಡೆಯನ್ನು ಸೇರುವ ನಿರ್ಧಾರ ಸರಿ ಎನಿಸಿತು.
ಸರಿ ಈಗ ವಿಷಯಕ್ಕೆ ಬರೋಣ. ಇದರ ಬಗ್ಗೆ ನನ್ನ ಅಭಿಪ್ರಾಯಕ್ಕೆ ಬರುವ ಮುನ್ನ, ಹೇರಿಕೆ ಪದದ ವ್ಯಾಖ್ಯಾನ ತಿಳಿದುಕೊಳ್ಳಬೇಕಾಯಿತು, ಸದ್ಯಕ್ಕೆ ನಡೆಯುತ್ತಿರುವ ಹೇರಿಕೆ ವಿರುದ್ದದ ಪ್ರತಿಭಟನಾ ವಿಧಾನಗಳ ಬಗ್ಗೆ ನಗಬೇಕೆಂದೆನಿಸಿತು. ಉದಾ: "ನಮ್ಮ ಮೆಟ್ರೋ" ದಲ್ಲಿ ಹಿಂದಿ ಬೇಡ.. ಆದರೆ ಯಾಕೆ ಹಿಂದಿ ಬೇಡ? ಎನ್ನುವ ನನ್ನ ಕುತೂಹಲಕ್ಕೆ ಸಮಂಜಸ ಉತ್ತರವಂತೂ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಯಾರೂ ಬಂದು ನೀನು ಈ ನಿಲ್ದಾಣದ ಹೆಸರನ್ನು ಹಿಂದಿಯಲ್ಲೇ ಓದಬೇಕು ಎಂದು ಹೇಳಲಿಲ್ಲ, ಹಾಗು ನಿಮಗೆ ಇಷ್ಟವಾದ, ನೀವು ಪ್ರೀತಿಸುವ ಮಾತೃಭಾಷೆಯಲ್ಲಿ ಓದುವ ಅವಕಾಶವನ್ಯಾರು ಕಸಿದುಕೊಂಡಿಲ್ಲ. ಹಂಗಾದ ಮೇಲೆ ಹೇರಿಕೆ ಪದದ ಬಳಕೆ ಯಾಕೆ ಬಂತು ಅಂತ ನಾ ಕಾಣೆ. ಪ್ರತಿದಿನ ಕಾಣುವ ನಾಮ ಫಲಕಗಳ ಮೇಲೆ ಕಾಣಸಿಗುವ ಹಿಂದಿಯನ್ನೇ ಹೇರಿಕೆ ಅಂತ ಬಿಂಬಿಸಿದರೆ ಅದ್ಯಾಕೋ ಅತಿಶಯೋಕ್ತಿ ಅಂದೆನಿಸುತಿದೆ.
ನಿಜವಾದ ಹೇರಿಕೆ ಅಂತೇನಾದರೂ ನಾ ಕಂಡರೆ, ಕನ್ನಡವನ್ನು ಧಿಕ್ಕರಿಸಿ ಹಿಂದಿಯನ್ನು ಮೇಲೆತ್ತುವ ಪ್ರಯತ್ನ ಮಾಡಿದಲ್ಲಿ ಅದನ್ನು ಹೇರಿಕೆ ಎನ್ನಬಹುದು, ಅಥವಾ ಹಿಂದಿಯನ್ನು ಕಲಿಯಲೇಬೇಕು ಎಂಬ ಕಡ್ಡಾಯವನ್ನು ಹೇರಿದಲ್ಲಿ ಹೇರಿಕೆ ಎನ್ನಬಹುದು. ನನಗೆ ತಿಳಿದಹಾಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ೫ ನೇ ತರಗತಿಯಿಂದ ಹಿಂದಿ ಒಂದು ಭಾಷಾ ವಿಷಯ, ಕಡ್ಡಾಯವಾಗಿ ಉತ್ತೀರ್ಣರಾಗಬೇಕು, ಸೋಜಿಗವೆಂದರೆ ನಾನು ೫ ನೇ ತರಗತಿಗೆ ಕಾಲಿಟ್ಟಾಗ, ಯಾರೂ ಈ ವಿಷಯ ಪ್ರಸ್ತಾಪಿಸಲಿಲ್ಲವೆ? ಇದು ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಏನೂ ಕಾಣುತ್ತಿಲ್ಲ, ಕನ್ನಡಿಗರಾದ ನಮಗೆ ಇದು ಇಷ್ಟು ದಿನ ಹೊಳೆಯಲಿಲ್ಲವೇ? ಅಥವಾ ಇದರ ಬಗ್ಗೆ ಹೋರಾಟಗಳು ಏನಾದರು ನಡೆದಿದ್ದರೆ ದಯಮಾಡಿ ತಿಳಿಸಿಕೊಡಿ. ಅದಕ್ಕೇನಂತೆ? ಮಾನವರಲ್ಲವೇ ನಾವು? ತಪ್ಪನ್ನು ತಿದ್ದಿಕೊಳ್ಳೋಣ. ಪ್ರತಿಭಟಿಸುವುದಾದರೆ ಮೊದಲು ಇದನ್ನು ನಿಲ್ಲಿಸಿ, ನನಗಂತೂ ೫ ನೇ ಕ್ಲಾಸಲ್ ಹಿಂದಿ ಓದುವಾಗ ಕಣ್ಣಲ್ಲಿ ನೀರು ಬಂದಿದ್ದಂತೂ ಸತ್ಯ. ಅದನ್ನು ಬಿಟ್ಟು ಮೆಟ್ರೋದಲ್ಲಿ ಹಿಂದಿ ಬೇಡ, ಅಂಚೆ ಕಛೇರಿ ಲಾಂಛನ ದಲ್ಲಿ ಕನ್ನಡ ಇಲ್ಲ.ರಾಷ್ಟ್ರೀಯ ಹೆದ್ದಾರಿ ಮೈಲಿಗಲ್ಲಿನ ಮೇಲೆ ಹಿಂದಿ ಇದೆ ಅಂದ್ರೆ ಹೆಂಗ್ ಸ್ವಾಮಿ ತಡ್ಕೊಬೇಕು ಜೀವ? ಅಂಚೆ ಕಛೇರಿಯದ್ದು "ಲಾಂಛನ" ಸ್ವಾಮಿ ಅದು, ಕೇಂದ್ರ ಸರ್ಕಾರದ ಒಂದು ಅಂಗ. ಏಕೀಕೃತ ಭವ್ಯ ಭಾರತಕ್ಕೆ ಅದೊಂದೇ ಲಾಂಛನ. ಇನ್ನು ಈ ಕೊರಟಗೆರೆ ಮೈಲಿಗಲ್ಲಿನ ಉದಾಹರಣೆಗೆ ಬರೋದಾದ್ರೆ, ಅದು ನಮ್ಮ ರಾಜ್ಯ ಹೆದ್ದಾರಿ ಆ ತಪ್ಪನ್ನು ಘನತೆವೆತ್ತ ಕರ್ನಾಟಕ ಸರ್ಕಾರ ತಿದ್ದಿಕೊಳ್ಳಲೇ ಬೇಕು. ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ-ನಿಮ್ಮ ಪ್ರೀತಿಯ ಕನ್ನಡ ಮುಖ್ಯ, ಪಕ್ಕದಲ್ಲಿ ಯಾವ ಭಾಷೆ ಬೇಕಾದರೂ ಬರೆದುಕೊಳ್ಳಿ. ಮೆಟ್ರೋದಲ್ಲಿ ಕನ್ನಡವಿದ್ದರೆ ಸಾಕು.
ಚೆನ್ನೈ ಮೆಟ್ರೋದಲ್ಲಿ ಹಿಂದಿ ಇಲ್ಲ ಅಂತ ನಮ್ಮ ಮೆಟ್ರೋದಲ್ಲೂ ಹಿಂದಿ ಬೇಡ ಎನ್ನುವ ವಾದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ನಿಮಗಿದು ತಿಳಿದಿದೆಯೋ ಇಲ್ಲವೋ, ಅಖಂಡ ಭಾರತ ದೇಶದ ತುಂಬಾ ಪ್ರತಿ ಜಿಲ್ಲೆಗೊಂದು "ಜವಾಹರ್ ನವೋದಯ ವಿದ್ಯಾಲಯ"ವಿದೆ. ಅದೊಂದು ರಾಜೀವ್ ಗಾಂಧಿಯವರ ಅಮೋಘ ಕನಸು, ಪ್ರಸ್ತುತ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃಧ್ದಿ ಇಲಾಖೆ ಅಡಿಯಲ್ಲಿ ಬರುತ್ತದೆ. ಈ ವಿದ್ಯಾಲಯ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳ ಬಾಳಿನ ಬೆಳಕು ಎಂದರೆ ತಪ್ಪಾಗಲಾರದು. ಬಹುಶಃ ಇದಿಲ್ಲದಿದ್ದರೆ ನಾನಿವತ್ತು ಯಾವ ಸ್ಥಿತಿಯಲ್ಲಿ ಇರ್ತಿದ್ನೋ ಆ ದೇವ್ರೇ ಬಲ್ಲ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ, ನವೋದಯ ಶಾಲಾ ವಿದ್ಯಾರ್ಥಿಯೇ ಬಲ್ಲ ಈ ವಿದ್ಯಾಲಯದ ಬೆಲೆ. ಈ ವಿಷಯ ಇಲ್ಲೇಕೆ ಪ್ರಸ್ತಾಪಿಸಿದೆ ಎಂದರೆ, ತಮಿಳರ ದುರದೃಷ್ಟವೋ ಏನೋ ತಮಿಳುನಾಡಿನಲ್ಲಿ ಒಂದೂ ನವೋದಯ ವಿದ್ಯಾಲಯವಿಲ್ಲ. ಕಾರಣ ಇಷ್ಟೆ, ಚೆನ್ನೈ ಮೆಟ್ರೋದಲ್ಲಿ ಹಿಂದಿ ಹೇಗೆ ಬೇಡವೋ ಹಾಗೆ ಈ ಶಾಲಾ ಅಭ್ಯಾಸದಲ್ಲೂ ಹಿಂದಿ ಬೇಡವಾಗಿತ್ತು. ಆದ್ರೆ ಹೇಳೋರ್ಯಾರು ಸ್ವಾಮಿ ಈ ತಮಿಳರಿಗೆ? ಈ ವಿದ್ಯಾಲಯದಲ್ಲೂ ಹಿಂದಿ ಒಂದು ಐಚ್ಚಿಕ ವಿಷಯ. ನವೋದಯ ವಿದ್ಯಾಲಯ ಸಮಿತಿ ತ್ರಿಭಾಷ ಪದ್ದತಿಯನ್ನು ಕಡ್ಡಾಯವಾಗಿ ಪಾಲಿಸುತ್ತಿದೆ ಅನ್ನೋ ಮೌಡ್ಯತೆಯನ್ನು ಅವರಲ್ಲಿ ಯಾರೂ ತುಂಬಿದ್ದಾರೋ ನಾನರಿಯೆ. ಈ ಪರಿಸ್ಥಿತಿ ನಮ್ಮ ಕನ್ನಡ ನಾಡಿನಲ್ಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. http://www.thehindu.com/todays-paper/tp-national/tp-tamilnadu/samithi-pitch-for-navodaya-schools/article2566316.ece
ಇನ್ನು ಬ್ಯಾಂಕುಗಳಲ್ಲಿ ಕೊಡಲಾಗುವ ಕನ್ನಡ ಪ್ರಾಮುಖ್ಯತೆಯನ್ನು ನಾನೂ ಖಂಡಿಸುತ್ತೇನೆ, ಇರೋಬರೋ ಫಾರಂಗಳನ್ನು ತುಂಬಲು ಕಷ್ಟ ಆಗುತ್ತಿರುವುದಂತು ನಿಜ, ಈ ವಿಷಯದಲ್ಲಿ ಮಾತನಾಡುವುದಿದ್ದರೆ ನನ್ನ ಬೆಂಬಲವಿದೆ. ಅದೂ ಕನ್ನಡ ಸೇರಿಸಲು, ಹಿಂದಿ ತೆಗೆಸಲು ಅಂತೂ ಅಲ್ಲ. ಬೇಕೆಂದರೆ ಭಾಷೆಗೊಂದರಂತೆ ಫಾರಂಗಳನ್ನೂ ಕೊಡಲಿ, ನಾನೇಕೆ ಬೇಡ ಎನ್ನಲಿ?
ಬನ್ನಿ ಸ್ವಾಮೀ, ಸಾದ್ಯ ಆದ್ರೆ ಕನ್ನಡವನ್ನು ಪ್ರೀತ್ಸೋಣ, ನಾಮ ಫಲಕದ ಮೇಲೆ ಸುಮ್ಮನೆ ಕುಳಿತಿರುವ ಹಿಂದಿಯ ಮೇಲೇಕೆ ನಿಮ್ಮ ಕೋಪ?
-ಭದ್ರ