ಹೀಗೊಂದು ಕಲ್ಪನಾ ಲಹರಿಯಲ್ಲಿ.
ನಮಸ್ಕಾರ ಗೆಳೆಯರೇ, ಸ್ನೇಹಿತರ ಜೊತೆಗೂಡಿ ಹೀಗೆ ಪ್ರವಾಸಕ್ಕೆಂದು ಹೊರಟಿದ್ದೆವು, ೫ ಘಂಟೆಯ ನಮ್ಮ ವಿಮಾನ ಪ್ರಯಾಣದಲ್ಲಿ ಮೊದಲ ೩ ಘಂಟೆ ಚೆನ್ನಾಗಿ ಉನೋ ಕಾರ್ಡ್ಸ್ ಆಡಿದ ನಂತರ ನಿದ್ದೆಗೆ ಜಾರಲು ಯತ್ನಿಸುತ್ತಿದ್ದೆವು. ಇನ್ನು ೨ ಘಂಟೆ ಪ್ರಯಾಣವಿತ್ತು ಆದರೆ ಯಾಕೋ ನಿದ್ರಾದೇವಿ ಸಹಕರಿಸುತ್ತಿರಲಿಲ್ಲ, ಕಿಟಕಿ ಪಕ್ಕ ಹಾಗೆ ಹೊರಗಡೆ ಇಣುಕಿ ಬೃಹದಾಕಾರದ ಭೂಗೋಳವನ್ನು ಗಮನಿಸುತ್ತಿರುವಾಗ, ಹಾಗೆ ಒಂದು ವಿಚಾರ ಥಟ್ಟಂತ ಹಾದು ಹೋಯಿತು. ತಲೆಗೆ ಬಂದ ವಿಚಾರವನ್ನು ಹಾಗೆ ಬರೆಯಲಾರಂಭಿಸಿದೆ, ನಾನೇಕೆ ಈಗ ಪ್ರಯಾಣಿಸುತ್ತಿರುವೆ? ಅಲ್ಲಲ್ಲ, ನಾನೇಕೆ ಈ ಅಮೆರಿಕಾಕ್ಕೆ ಬಂದದ್ದು? ನೋ ನೋ, ನಾನೇಕೆ ಕೆಲಸಕ್ಕೆ ಸೇರಿದ್ದು? ನಾನೇಕೆ ಶಾಲಾ-ವಿದ್ಯಾಭ್ಯಾಸದ ಹಿಂದೆ ಬಿದ್ದದ್ದು? ಅಲ್ಲಿಗೆ ನಿಲ್ಲಲ್ಲಿಲ್ಲ, ನಾನೇಕೆ ಜನಿಸಿದ್ದು? ಒಮ್ಮೆ ನಸುನಕ್ಕು ಇನ್ನು ಹಿಂದೆ ಸರಿದ ನನಗೆ ಈ ವಿಶಾಲ ಪ್ರಪಂಚದಲ್ಲಿ ನಾನ್ಯಾವ ಲೆಕ್ಕ, ಮೊದಲಿಗೆ ಮನುಷ್ಯ ಏಕೆ ಉದಯಸಿದ್ದು? ಇನ್ನು ಆಳವಾಗಿ ಹೋದರೆ, ಈ ವಿಶ್ವವಿರುವುದಾದರು ಯಾಕೆ? ಬೆಟ್ಟ-ಗುಡ್ಡ, ಪ್ರಾಣಿ-ಸಸ್ಯ ಸಂಕುಲ, ವಿಶಾಲ ಸಾಗರ, ಜಲಚರ ಜೀವಿಗಳು ಇರುವುದಾದರು ಯಾಕೆ? ಸೂರ್ಯ ಚಂದ್ರರ ಸೃಷ್ಟಿಯಾದರು ಯಾಕಾಯಿತು? ಇನ್ನು ಧೀರ್ಘಕ್ಕೆ ಹೋಗುವುದಾರೆ, ಈ ವಿಶಾಲವಾದ ನಭೋಮಂಡಲವೆಲ್ಲಿಂದ ಬಂತು? ಇಷ್ಟೊಂದು ಜಾಗವಿರುವ ಅರ್ಥವಾದರೂ ಏನು? ಹೀಗೆ ಕೊನೆ ಇಲ್ಲದ ಪ್ರಶ್ನೆಗಳ ಸರಮಾಲೆಯ ದಿಗ್ದರ್ಶನವಾಯಿತು,
ಅಯ್ಯಯ್ಯೋ, ಇದ್ಯಾಕೋ ತುಂಬಾ ಅತಿಯಾಯ್ತು ಅನ್ನುವ ಹೊತ್ತಿಗೆ ಮತ್ತೆ ಯೋಚನಾಲಹರಿ ಮಾನವನ ಉಗಮ, ಹಾದಿಯ ಕಡೆಗೆ ಸಾಗಿತು. ಸರಿ ಬಿಡಿ ಹೇಗೋ ಮಾನವನ ಉದಯವಾಯಿತು, ಅವನ ಹುಟ್ಟಿನ ಮುಂಚೆಯೇ ಅವನಿಗೆ ಬೇಕಾದ ಊಟ ಉಪಚರಗಳೆಲ್ಲ ಸಿದ್ಧವಾಗಿದ್ದವು. ಯಾರೂ ತಟ್ಟೆಯಲ್ಲಿ ಇಟ್ಟು ಕೊಟ್ಟಿರಲಿಲ್ಲ ರೀ, ಅದೇ ಹಣ್ಣು-ಹಂಪಲು ಗೆಡ್ಡೆ-ಗೆಣಸು ಎಲ್ಲ ಇದ್ದವಲ್ಲ? ಒಮ್ಮೊಮ್ಮೆ ಕಷ್ಟಪಟ್ಟರೆ ಸಿಗುತ್ತಿತ್ತು ಒಮ್ಮೊಮ್ಮೆ ಸುಲಭವಾಗಿ. ಆದರೆ ಹಸಿವೇಕೆ ಆಗುವುದು ಎಂದು ಪ್ರಶ್ನಿಸಿದರೆ ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ಹುಟ್ಟು-ಸಾವಿನ ಜೊತೆಗೆ ಹಸಿವು ಬಳುವಳಿಯಾಗಿ ಬಂದಿತು ಅಂದುಕೊಂಡು ಅಲ್ಲಿಗೆ ಹಸಿವಿನ ವಿಷಯ ಬಿಡೋಣ. ಈ ಹಸಿವು ನೀಗಲು ಸುತ್ತಮುತ್ತ ಸಕಲ ಸೌಕರ್ಯವಿರುವಾಗ, ಯಾವ ಪರಮ ಪುಣ್ಯಾತ್ಮ ತಲೆಗೆ ತುಂಬಿದಾ ರೀ ಈ ಮಾನವನಿಗೆ ಮುಂದೆ ಹೋಗಲು? ಸುಮ್ನೆ ಆರಾಮಾಗಿ ಕಾಡು-ಮೇಡು ಅಲೆದಾಡಿಕೊಂಡು, ಸಿಕ್ಕಿದ್ದನ್ನು ತಿನ್ಕೊಂಡು ಜೀವನ ಸಾಗ್ಸೋದ್ ಬಿಟ್ಟು ಯಾಕ್ ಬೇಕಿತ್ತಪ್ಪ ಈ ಇಲ್ದೆ ಇರೋ ಉಸಾಬರಿ ಎಲ್ಲ? ಯಾರಪ್ಪ ಇವನಿಗೆ ಬಟ್ಟೆ ಹಾಕೋಬೇಕು ಎಂಬ ಉಪಾಯ ಕೊಟ್ಟವರು? ಬಟ್ಟೆ ಎಂದರೆ ಜೀನ್ಸ್ ಟಿ-ಶರ್ಟ್ ಅಲ್ಲ ಪ್ರಭುವೇ, ಎಲೆ ಪೋಣಿಸಿ ಗುಪ್ತಾಂಗವನ್ನು ಮೊದಲು ಮುಚ್ಚಿಕೊಂಡಿದ್ದು. ಮಾನವನಿಗೆ ಹಸಿವಿನ ಜೊತೆ, ತನ್ನ ಅಸ್ತಿತ್ವನ್ನು ಉಳಿಸಿ ಹೋಗಬಹುದೆಂಬ ನೈಸರ್ಗಿಕ ಅರಿವೊಂದು ಉಡುಗೊರೆಯಾಗಿ ಬಂತು ಎನ್ನಬಹುದು. ಮಾನವನಂತೆ ಎಲ್ಲ ಪಶು-ಪಕ್ಷಿಗಳಿಗಳಿಗೂ ಈ ವ್ಯವಸ್ಥೆ ಇತ್ತು, ಆದರೆ ಅದಕ್ಕೋಸ್ಕರ ಇರುವ ಅಂಗಾಂಗಗಳನ್ನು ಮಾನವರಿಂದ ಮಾತ್ರ ಮುಚ್ಚಿಕೊಳ್ಳುವ ಕ್ರಿಯೆ ಯಾಕೆ ಶುರುವಾಯಿತೆಂದು ನನಗೀಗಲೂ ನಿಜವಾಗಿಯೂ ತಿಳಿಯದು. ನಿಮಗೇನಾದರೂ ತಿಳಿಯಿತೆ ಯಾಕೆ "ಬಟ್ಟೆ ಉಂಟು" ಎನ್ನುವ ಸಂಪ್ರದಾಯ ಶುರುವಾಯಿತೆಂದು?
ಈಗಾಗಲೇ ದೊಡ್ಡ ದೊಡ್ಡವರು ಹೇಳಿರುವ ಹಾಗೆ ಮಾನವನಿಗೆ ಬುದ್ಧಿ ಶಕ್ತಿ ಅವನು ತಯಾರಾದಾಗಲೇ ಬೇರೆ ಜೀವಿಗಳಿಗಿಂತ ಜಾಸ್ತಿ ಇತ್ತು. ಥತ್, ಅಲ್ಲೇ ನೋಡ್ರಿ ಎಡವಟ್ಟು ಶುರುವಾಗಿದ್ದು. ಯಾಕಪ್ಪ ಬೇಕಿತ್ತು ಈ ಹೆಚ್ಚುವರಿ ಬುದ್ಧಿಶಕ್ತಿ? ಆಗ ಸಿಕ್ಕ ಆ ಅಧಿಕ ನೈಜ ಕಾಣಿಕೆ ಈಗ ಸುಖಕರ ಜೀವನಕ್ಕೆ ತಂದು ನಿಲ್ಲಿಸಿದೆಯೋ ಅಥವಾ ಪೈಪೋಟಿ ಜೀವನಕ್ಕೆ ತಂದು ನಿಲ್ಲಿಸಿದೆಯೋ? ದೇವರಾಣೆ ಅರ್ಥ ಆಗ್ತಿಲ್ಲ ಕಣ್ರೀ. ಅಲ್ಲಿಂದ ಆರಂಭವಾದ ಮಾನವನ ಪಯಣ ಇಲ್ಲಿವರೆಗೂ ತಿರುಗೀ ತಿರುಗೀ ತಿರುಗೀ ನೀವ್ ನೋಡ್ತಿರೋ ಈ ಸೂಪರ್ ಸ್ಪರ್ಧಾತ್ಮಕ ಸ್ಥಿತಿಗೆ ಬಂದು ನಿಂತಿದೆ, ಮಗು ಎದ್ದು ಅಮ್ಮನ ಮಡಿಲಲ್ಲಿ ಆಡೋ ವಯಸ್ಸಲ್ಲಿ ಕಾನ್ವೆಂಟ್ ಮೇಡಂ ಜೊತೆ ABCD ಹಾಡೋ ಪರಿಸ್ಥಿತಿ.
ಬದುಕಿಗೆ ಒಂದು ಅರ್ಥ ಕಲ್ಪಿಸಿಕೊಡುವ ಭರಾಟೆಯಲ್ಲಿ ಕಷ್ಟ ಪಡಬೇಕೋ? ಸುಖವಾಗಿರಬೇಕೋ? ಅಥವಾ ಮುಂದೆಂದೋ ಸುಖಕರವಾಗಿರಲು ಇಂದು ಕಷ್ಟ ಪಡಬೇಕೋ? ಅನ್ನುವ ಸ್ಥಿತಿಗೆ ತಲುಪಿದೆವಲ್ಲ ನಾವು? ಹೌದು, ಈ ಸುಖಕರ ಜೀವನ ಅಂದ್ರೆ ಏನು? HSR ನಂಥ ದೊಡ್ಡ ಬಡಾವಣೆಯಲ್ಲಿ ಒಂದು ಒಳ್ಳೆ ಮನೆ ಕಟ್ಕೊಂಡು, ಅಡ್ಡಾಡೋಕೆ ಒಂದು ಕಾರ್ ತಗೊಂಡು, ತಿಂಗಳಿಗೊಂದು ಊರು ಸುತ್ಕೊಂಡು, ಹೆಂಡ್ತಿ-ಮಕ್ಳು ಜೊತೆ ಆರಾಮಾಗಿ, ಯಾವುದೆ ಚಿಂತೆ ಇಲ್ದೆ ಸಂಸಾರ ಮಾಡೋದಾ? ಇದ್ದರು ಇರಬಹುದು ಇದ್ದರು ಇರಬಹುದು. ಅಥವಾ ಸೂರ್ಯನ ಕಿರಣ ಮೈ ಮೇಲೆ ಬಿದ್ಮೇಲೆ ಎದ್ದು, ನದಿಯಲ್ಲಿ ಈಜಾಡಿ, ಯಾವದಾದ್ರು ಹಣ್ಣು ಹಂಪಲು ತಿಂದು, ಆಕಡೆ-ಈಕಡೆ ಅಡ್ಡಾಡಿ, ಮರ-ಬೆಟ್ಟ ಹತ್ತಿಳಿದು, ಹೊತ್ತಿಳಿದ ಮೇಲೆ ಮತ್ತೆ ಮಲ್ಕೊಳೋದ? ಏನಪ್ಪಾ ಈ ಗೊಂದಲ? ಎರಡನೆಯದನ್ನು ಮಾಡೋಕೆ ಏನೂ ಬೇಕಿಲ್ಲ, ಮನುಷ್ಯನ ಸೃಷ್ಟಿಯಾಗಿದ್ದೆ ಹಾಗೆ ಅಲ್ವ? ಏನ್ ಕಮ್ಮಿ ಆಗಿತ್ತು ಅಂತ ಈ ಜನ್ಮಕ್ಕೆ? ಸ್ವಚಂದ ಪರಿಸರವಿತ್ತು, ತಿನ್ನಲು ಆಹಾರವಿತ್ತು, ನಿದ್ರೆಗೆ ಗುಹೆ, ಪೊಟರೆಗಳಿದ್ದವು, ನೈಸರ್ಗಿಕ ಕ್ರಿಯೆ ನೀಗಿಸಿಕೊಂಡು ಅಸ್ತಿತ್ವವನ್ನು ಉಳಿಸಿ ಹೋಗಲು ಹೆಣ್ಣು-ಗಂಡು ಎಂಬ ಜಾತಿಯೂ ಇತ್ತು. ಆದ್ರೆ ಯಾವ ಕ್ಷಣದಲ್ಲಿ ಈ ತಿರುವು ಬಂತು ಈ ಹೈದನ ತಲೆಯಲ್ಲಿ,? ಯಾಕೆ ಈ ಆವಿಷ್ಕಾರಗಳ ಹಿಂದೆ ಬಿದ್ದ?
ಬದುಕನ್ನು ಸುಖಕರ ಮಾಡಿಕೊಳ್ಳುವ ಹಂಬಲದಲ್ಲಿ ಯಾಕೆ ಕಷ್ಟವನ್ನೂ ಸೇರಿಸಿಕೊಂಡ? ಮಾನವನ ದಾರಿ ಇತರೆ ಜೀವಿಗಳ ಜೀವನ ಶೈಲಿಯ ಹಾದಿಯಿಂದ ಕವಲೊಡೆದು, ಈಗಿನ ಆಧುನಿಕ ಪರಿಸ್ಥಿತಿಗೆ ತಲುಪಿರುವುದು ರೋಮಾಂಚನಕಾರಿ ಎನಿಸುವುದಿಲ್ಲವೇ? ತಿಂದುಂಡು-ಮಲಗಿ ಬದುಕುವ ಮಧ್ಯದಲ್ಲಿ, ಈ ಮಾನವ ನಿರ್ಮಿತ ಮನೆ-ಮಠ, ದೇವ್ರು-ದಿಂಡ್ರು, ಓದು-ಬರಹ, ಕೆಲಸ-ಕಾರ್ಯ, ದುಡ್ಡು-ಕಾಸು, ನಿನ್ನಾಸ್ತಿ-ನನ್ನಾಸ್ತಿ,, ಬಡತನ-ಸಿರಿತನ, ಮೇಲ್ಜಾತಿ -ಕೀಳ್ಜಾತಿ, ಕಂಪ್ಯೂಟರ್-ಸಿ-ಜಾವ, ಬಸ್ಸು-ಲಾರಿ-ವಿಮಾನ-ರಾಕೆಟ್, ಅಯ್ಯಯ್ಯೋ ಹೇಗೆ ಒಂದಾದಮೇಲೆ ಒಂದು ಬಂದು ನಮ್ಮೊಳಗೊಂದಾದವು ಎಂಬುದೇ ವಿಚಿತ್ರ. ಇವು ಇಲ್ದಿದ್ರೆ ಹೆಂಗಿರ್ತಿತ್ತು? ಕೆಲವು ಆವಿಷ್ಕಾರಗಳು ನಡೆಯದಿದ್ದರೆ ಜೀವನ ಸಾಗಿಸುವುದೇ ಕಷ್ಟ ಎನ್ನುವ ಸಮಯ ಬಂದಾಗಿದೆ, ಇವ್ಯಾವೂ ಇಲ್ಲದೆಯೂ ಒಂದು ಪ್ರಪಂಚವಿತ್ತು ಎಂಬ ಕಟು ಸತ್ಯ ಯಾವಾಗಲೋ ಮರೆಯಾಗಿದೆ. ಕೆಲವು ಬದುಕನ್ನು ಸರಳಗೊಳಿಸಿದ್ದರೆ, ಇನ್ನು ಕೆಲವು ಅಂಶಗಳು ಜೀವನವನ್ನು ವಿರೂಪಗೊಳಿಸಿವೆ ಎಂದರೆ ತಪ್ಪಾಗಲಾರದು ಅನಿಸುತಿದೆ. ಈ ಹುಲಿ-ಸಿಂಹ-ಆನೆಗಳಿಗೆ ಹೋಲಿಸಿಕೊಂಡರೆ ಯಾವ್ ಲೆಕ್ಕದಲ್ಲಿ ಮಾನವನ ತೋಳ್ಬಲ ಜಾಸ್ತಿರಿ? ಈ ಬುದ್ದಿಶಕ್ತಿ ಒಂದ್ ಹೆಚ್ಚು ಇಲ್ದಿದ್ರೆ ಯಾವತ್ತೋ ವಿನಾಶ ಅಗೊಗ್ತಿದ್ದ ಮಾನವ. ಇಷ್ಟೆಲ್ಲಾ ಆವಿಷ್ಕಾರಗಳ ನಂತರವೂ ನಿಸರ್ಗದ ಅಗಾಧ ಶಕ್ತಿಯ ಮುಂದೆ ನಾವು ತೃಣಕ್ಕೆ ಸಮಾನ ಎಂದು ಎಷ್ಟೋ ಸಲ ಸಾಬೀತಾಗಿದೆ.
ನಾನೇನು ಕೇಳಲು ಬಯಸುತ್ತಿರುವೆ ಎಂದರೆ ಈ ಮಾನವ ಜನ್ಮದ ಪರಮ ಧ್ಯೇಯವೇನು? ಮುಂದಿನ ಪೀಳಿಗೆಗೆ ಈ ಪ್ರಪಂಚವನ್ನು ಸುಖಕರವಾಗಿರಲು ಬಿಡುವುದಾ? ಅಥವಾ ಪೈಪೋಟಿ ನಡೆಸಲು ಬಿಡುವುದಾ? ಈಗ ಜನನದಿಂದಲೇ ಶುರುವಾಗುವ ಈ ಪೈಪೋಟಿ ಕೊನೆಯುಸಿರೆಳೆಯುವವರೆಗೂ ಸಾಗುತ್ತಿದೆ. ಅಗತ್ಯವೇ ಆವಿಷ್ಕಾರದ ತಾಯಿ ಎಂದು ಹೇಳ್ತಾರೆ, ಆದರೆ ಈ ಅಗತ್ಯದ ತಾಯಿಯನ್ನು ಹುಡುಕಬೇಕಿದೆ. ಬದುಕಲು ಬೇಕಾದ ಗಾಳಿ-ನೀರು-ಆಹಾರ ಜೊತೆಗಿದ್ದಾಗ, ಮೂರನ್ನು ಕಲುಷಿತ ಗೊಳಿಸಿದೆ ನಮ್ಮೀ ಯೋಚನಾ ಶಕ್ತಿಗೆ ಜೈ ಅನ್ನಬೇಕೋ ಮತ್ತೊಂದನ್ನಬೇಕೋ ನಾನರಿಯೆ.
"ಲೇ, ಇಷ್ಟೆಲ್ಲಾ ಬರೆಯೋನು ಹೋಗಿ ಕಾಡಲ್ಲಿ ಬದುಕೋ" ಎಂದು ಕೇಳುವ ಮುನ್ನ ದಯವಿಟ್ಟು ತಡ್ಕೊಳ್ಳಿ :) ಸುಮ್ನೆ ಕೆಲ್ಸ ಇಲ್ದೆ ಏನೋ ಗೀಚಿದೀನಿ, ಈ ಜಗತ್ತು ಬದಲಾದ ಪರಿಯ ಬಗ್ಗೆ ನೆನೆದು ತಲೆಗೆ ತೋಚಿದ್ದನ್ನು ಬರವಣಿಗೆ ರೂಪ ಕೊಡುವ ಸಣ್ಣ ಪ್ರಯತ್ನ ಅಷ್ಟೇ, ನಾನು ನಿಮ್ಮೊಳಗೊಬ್ಬ, ಇದನ್ನ ಯೋಚ್ನೆ ಮಾಡ್ತಾ ಅಂತೂ ಕೂತ್ಕೊಳಲ್ಲ, ಬೆಳೆಗಾದರೆ ತಯಾರಾಗಿ ID ಕಾರ್ಡ್ ಎತ್ಕೊಂಡು ಕೆಲಸಕ್ಕೆ ಓಡಬೇಕು. ಆಗಿರೋ ಆವಿಷ್ಕಾರಗಳೆಲ್ಲವನ್ನು ಅನುಭವಿಸುತ್ತ, ಏನೋ ಕಲಿತ ಕೆಲಸ ಮಾಡುತ್ತಾ, ಬದುಕೆಂಬ ಬಂಡಿ ಆರಾಮಾಗೆ ಸಾಗಿಸ್ತಾ ಇದಿನಿ. ಈಗಾಗಲೇ ಡಾರ್ವಿನ್ ಅಂಥ ಮಹಾನ್ ವ್ಯಕ್ತಿಗಳು ಇದರ ಬಗ್ಗೆ ಸಿದ್ಧಾಂತ ಬರ್ದಿದಾರೆ, ನಾವ್ಯಾಕೆ ತಲೆ ಕೆಡ್ಸ್ಕೊಳೋಣ, ಯಾವಾಗಲೋ ನಮ್ಮ ಜೀವಶಾಸ್ತ್ರ ವಿಷಯದ ಮೇಷ್ಟ್ರು ಮಾಡಿದ ಪಾಠ ಅಷ್ಟು-ಇಷ್ಟು ನೆನಪಿದೆ, ಸಮಯ ಮಾಡ್ಕೊಂಡು ಇನ್ನೊಂದ್ಸಲ ಓದಿ ಅದೇನ್ ಅರ್ಥ ಆಗತ್ತೋ ನೋಡ್ತಿನಿ., ನೀವ್ ತಲೆ ಕೆಡ್ಸ್ಕೊಬೇಡಿ. ಮತ್ತೆ ಸಿಗೋಣ. ಬಹುಷಃ ಇನ್ನೊಂದು ತಲೆ-ಬುಡ ವಿಲ್ಲದ ಬರಹದ ಜೊತೆ.
-ಭದ್ರ
Nice baravanige Bhadra Avare.
ReplyDeleteNimma ankanavannu tappadhe odhuvanagiddene.
Thanks😊
Delete