Thursday, 10 August 2017

ತೆಳು ನೀಲಿ ಚುಕ್ಕೆ

ತೆಳು ನೀಲಿ ಚುಕ್ಕೆ


        ನಮಸ್ಕಾರ ಸ್ನೇಹಿತರೆ, ೧೯೭೭ ಸೆಪ್ಟೆಂಬರ್ ನಲ್ಲಿ ನಾಸಾ (NASA) ಸಂಸ್ಥೆ ವಾಯೋಜೆರ್-೧ ಎಂಬ ರೊಬೋಟಿಕ್ ಬಾಹ್ಯಾಕಾಶ ನೌಕೆಯೊಂದನ್ನು ಸೌರಮಂಡಲ ಮತ್ತು ಅದರಾಚೆಗಿನ ಸಂಶೋಧನೆಗಾಗಿ ಉಡಾಯಿಸಿತು. ಸುಮಾರು ೧೨ ವರ್ಷಗಳ ನಂತರ ನೌಕೆ ತನ್ನ ಪ್ರಮುಖ ಕಾರ್ಯಾಚರಣೆ ಮುಗಿಸಿ ಸೌರಮಂಡಲ ಬಿಟ್ಟು ಆಚೆ ಹೋಗುವ ಮುನ್ನ ಅದಕ್ಕೆ ಕೊನೆಯದಾಗಿ ಭೂಮಿಯ ಒಂದು ಛಾಯಾಚಿತ್ರ ತೆಗೆಯಲು ಆದೇಶ ಕೊಡಲಾಯಿತು, ಶಿವಗಾಮಿಯ ರಾಜಾಜ್ಞೆಯನ್ನು ಕಟ್ಟಪ್ಪ ಪಾಲಿಸಿದಂತೆ ಅಂದಾಜು ೬೦೦ ಕೋಟಿ ಕಿಲೋಮೀಟರು ದೂರದಿಂದ ತನ್ನ ಕ್ಯಾಮೆರ ಕಣ್ಣನ್ನು ನಮ್ಮ ಕಡೆ ತಿರುಗಿಸಿ, ಕಣ್ಣು ಮಿಟುಕಿಸಿ ಒಂದು ಛಾಯಾಚಿತ್ರ ತೆಗೆದು ಕಳುಹಿಸಿತು. ಆ ಚಿತ್ರದ ವಿಶೇಷತೆ ಏನೆಂದರೆ, ಅದರಲ್ಲಿ ಇಡೀ ಏಳು ಖಂಡಗಳ, ಪಂಚ ಮಹಾಸಾಗರಗಳ ಭೂಮಂಡಲ, ಗಣಕಯಂತ್ರದ ಒಂದು ಪಿಕ್ಸೆಲ್ ಗಿಂತಲೂ ಕಿರಿದಾಗಿ ಕಾಣಿಸುತ್ತದೆ. ಆಗಿನ ನಾಸಾ ಬಾಹ್ಯಾಕಾಶ ವಿಜ್ಞಾನಿ ಕಾರ್ಲ್ ಎಡ್ವರ್ಡ್ ಸಾಗ್ಸನ್ ಈ ಚಿತ್ರಪಟವನ್ನು ಒಂದು ತೆಳು ನೀಲಿ ಚುಕ್ಕೆ (The Pale Blue Dot) ಎಂದು ವರ್ಣಿಸುತ್ತಾನೆ.  ನಾನಿದನ್ನು ಅತಿದೂರದಿಂದ ಶಾರಿಣಿ ತೆಗೆದುಕೊಂಡ ಸ್ವಯಂ ಛಾಯಾಚಿತ್ರ (longest selfie ever taken) ಎಂದು ಬಣ್ಣಿಸುತ್ತೇನೆ 😎. ತದನಂತರ ನೌಕೆ ತನ್ನ ಕ್ಯಾಮೆರ ಕಾರ್ಯವನ್ನು ಸ್ಥಗಿತಗೊಳಿಸಿ ಮುಂದಿನ ಅನ್ವೇಷಣೆಗಾಗಿ ತನ್ನ ಯಾನ ಮುಂದುವರಿಸಿ ಇಲ್ಲಿಯವರೆಗೂ, ಅಂದರೆ ೪೦ ವರ್ಷದ ವರೆಗೂ ಅಂತ್ಯವಿಲ್ಲದೆ ಕೋಲ್ಮಿಂಚಿನಂತೆ ಅಂತರಿಕ್ಷವನ್ನು ಸೀಳಿಕೊಂಡು ಮುನ್ನುಗ್ಗುತ್ತಿದೆ.


  ಇಂದೇಕೆ ಈ ಚುಕ್ಕಿ ಹಿಂದೆ ಬಿದ್ದೆ ಎಂದರೆ, ನನಗೆ ಈ ಚಿತ್ರಪಟವನ್ನು ಜ್ಞಾನಿಗಳು ಅರ್ಥೈಸಿದ ರೀತಿ ಅದ್ಬುತ ಎನಿಸಿತು, ಅದೆಷ್ಟು ಸಣ್ಣದಾಗಿದ ಎಂದರೆ, ಇಡೀ ವಿಶ್ವ ಇಷ್ಟೇನಾ? ಪ್ರತಿಯೋರ್ವನ ಸುಖ-ದುಃಖ, ಆಸೆ-ಆಕಾಂಕ್ಷೆ, ಪ್ರೀತಿ-ಪ್ರೇಮ, ದ್ವೇಷ-ಅಸೂಯೆ, ಅನಿಸಿಕೆ-ಅಭಿಪ್ರಾಯಗಳು, ಹೊಸ ವಿಶ್ಲೇಷಣೆಗಳು, ಕಲ್ಪನೆಗಳು, ಥೇರಿಗಳು, ಪ್ರಪಂಚ ಕಂಡಂತಹ ಪ್ರತಿಯೊಬ್ಬ ರಾಜ-ರಾಕ್ಷಸರು, ಸಾಧು-ಸಂತರು, ಉಗ್ರರು, ಚಿಂತನಕಾರರು, ವಿಜ್ಞಾನಿಗಳು, ನಟಶ್ರೇಷ್ಟರು, ಆಟಗಾರರು, ರಾಜಕಾರಿಣಿಗಳು, ರಾಜಕೀಯ ಪಕ್ಷಗಳು, ಭ್ರಷ್ಟರು, ಶಿಷ್ಟರು, ಜಾತಿ-ಜಂಜಾಟಗಳು, ಧರ್ಮ-ಪಂಗಡಗಳು, ಆರ್ಥಿಕ ವ್ಯವಸ್ಥೆ, ಸಂವಿಧಾನ, ಕೋರ್ಟು-ಕಛೇರಿಗಳು, ಹೆಣ್ಣು-ಹೊನ್ನು-ಮಣ್ಣಿಗಾಗಿ ನಡೆದ ರಕ್ತಪಾತಗಳು, ಸಾವು-ನೋವುಗಳು, ಆವಿಷ್ಕಾರಗಳು, ಪ್ರಕೃತಿ ಸೌಂದರ್ಯ ಖನಿಗಳೆನಿಸಿದ ಬೆಟ್ಟ-ಗುಡ್ಡ, ನದಿ-ಸಾಗರ, ಪಶು-ಪಕ್ಷಿ ಸಂಕುಲ,ಜಲಪಾತ-ಕಣಿವೆಗಳು, ಕಡಲ ತೀರಗಳು, ಹೀಗೆ ಕಾಣಸಿಗುವ ಪ್ರತಿಯೊಂದು ವಿಷಯವೂ, ವಸ್ತುವೂ ಕೇವಲ ಒಂದು ಚಿಕ್ಕ ಚುಕ್ಕೆಯೊಳಗೆ ಮುಗುಚಿಕೊಂಡಿವೆ ಎಂದರೆ ಅರಗಿಸಿಕೊಳ್ಳಲೂ ಕಷ್ಟವಾಗುವ ಅಂಶ. ಇಷ್ಟೊಂದು ವ್ಯಾಪಕ ನಭದಲ್ಲಿ, ಇಳೆ ಮತ್ತು ಘಟಿಸಿ ಹೋದ ಘಟನೆಗಳೆಲ್ಲವೂ ಒಂದು ಮಟ್ಟಕ್ಕೆ ನಗಣ್ಯ ಎಂದರೆ ಮೈನವಿರೇಳುವುದು ಸಹಜ ಮತ್ತು ಈ ಮಾತು ನೂರಕ್ಕೆ ನೂರು ಪ್ರತಿಶತ ಸತ್ಯ ಕೂಡ.

  ಇದೇ ತರಹ ನರ-ಮನುಷ್ಯನ ಜೀವಿತಾವಧಿಯನ್ನು ಬಿಂಬಿಸುವ ಹಾಗು ಚಿಂತನೆ ನಡೆಸಬಹುದಾದ ಇನ್ನೊಂದು ಚಿತ್ರವಿದೆ, ಒಂದು ವೀಡಿಯೊ ತುಣುಕಿಂದ ಈ ಚಿತ್ರವನ್ನು ಕತ್ತರಿಸಿದ್ದು, ಆರಂಭದಿಂದಲೂ ಸಮಯವನ್ನು ಒಂದು ರೇಖಾಚಿತ್ರದಲ್ಲಿ ಗುರುತಿಸುವುದಾದರೆ, ಮಾನವ ಯುಗ ಇದರಲ್ಲಿರುವ ಕೆಂಪು ಗೆರೆಯಷ್ಟೇ:

        ನಶಿಸಿಹೋದ ಹಾಗು ಮುಂಬರುವ ಕಾಲಮಾನದಲ್ಲಿ, ಪ್ರಥಮ ಮಾನವನಿಂದ ಕೊನೆಯ ಮಾನವನವರೆಗೆ ಇರುವ ಸಮಯ ಎಷ್ಟು ಕಡಿಮೆಯೆಂದು ಗಮನಿಸಿದರೆ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲವೂ ಮಾಯವಾಗಬಲ್ಲದು ಎಂಬ ತತ್ವ ಕಣ್ಮುಂದೆ ಮಿಂಚಿ ಮರೆಯಾಗುತ್ತದೆ.
  ಸರಿ ಈಗ ವಿಷಯಕ್ಕೆ ಬರೋಣ, ಈ ತರಹದ ಚಿತ್ರಗಳನ್ನು ನೋಡಿ ನಾವು ಯೋಚಿಸುವ ಶೈಲಿ ಒಮ್ಮೆಮ್ಮೆ ಹೇಗೆ ಬದಲಾಗುತ್ತದೆ ಎಂದು, ಹೇಗೆ ಒಬ್ಬಬ್ಬರು ಒಂದೊಂದು ರೀತಿಯಾಗಿ ಇದನ್ನು ಅರ್ಥೈಸಿ ಜೀವನದಲ್ಲಿ ನಿಲುವುಗಳನ್ನು ಬೆಳೆಸಿಕೊಳ್ಳುತ್ತೇವೆ ಎಂದು. ಪ್ರಮುಖವಾಗಿ ಮೂರು ಪಂಥೀಯ ಜನರನ್ನು ಗುರುತಿಸಬಲ್ಲೆ, ಒಂದು ಕಡೆ, ಜೀವನ ಇಷ್ಟೇನಾ? ಛೆ!! ನಾನೇನು ಮಾಡಿದರೂ ನಗಣ್ಯ ಎಂದು ಎಲ್ಲವನ್ನೂ ತಿರಸ್ಕರಿಸುವ ನಿರಾಕರಣವಾದಿಗಳು (Nihilists), ಇವರ ಪ್ರಕಾರ ಇಷ್ಟೊಂದು ಅರ್ಥಪೂರ್ಣ ಬದುಕಿಗೆ ಯಾವ ಬೆಲೆಯೂ ಇಲ್ಲ, ಮತ್ತು ಅದರ ಬಗ್ಗೆ ಕಿಂಚಿತ್ತು ವಿಶ್ವಾಸ ತೋರದೆ, ಎಲ್ಲವನ್ನು ಸಾರಾಸಗಟಾಗಿ ದೂರತಳ್ಳಬಹುದು. ಇವರಿಂದ ಹಾನಿಇಲ್ಲವಾದರು, ನಯಾಪೈಸೆ ಪ್ರಯೋಜನ ಅಂತು ಇಲ್ಲ. ಆದರೂ ಇಂಥವರು ಕೊಂಚ ಅಪಯಾಕಾರಿ, ಪರರ ಜೀವನವನ್ನು ಇವರು ನಿರಾಕರಣವಾದದ ಕಡೆ ವಾಲಿಸಲು ತಮ್ಮ ಪ್ರಭಾವ ಬೀರಬಲ್ಲರು, ಕೊಂಚ ಎಚ್ಚರ ತಪ್ಪಿದರೂ ನಾವು ಈ ಕೂಪಕ್ಕೆ ಬೀಳುವುದು ಖಚಿತ.
  ಇನ್ನೊಂದು ಕಡೆ, ಅಯ್ಯೋ ಏನು ಮಾಡಿದರು ಎಲ್ಲವೂ ಶೂನ್ಯ, ಮುಂದೆ ಇವೆಲ್ಲ ಯಾವ ಲೆಕ್ಕಕ್ಕೂ ಬರುವುದಿಲ್ಲ, ಸರಿ ಹಾಗಾದ್ರೆ, ಸಿಕ್ಕ ಸಿಕ್ಕ ಕೆಟ್ಟ ಕೆಲಸಕ್ಕೆ ಕೈ ಹಾಕಬಹುದು, ಯಾರನ್ನು ಹೇಗೆ ಬೇಕೆಂದರೆ ಹಾಗೆ ಹಳಿಯಬಹುದು, ಇನ್ನೊಬ್ಬರ ಮನ ನೋಯುಸುವುದಿರಲಿ, ಗುಂಡಿಟ್ಟು ಪ್ರಾಣ ತೆಗೆಯಲೂ ಯೋಚಿಸುವವರಲ್ಲ, ಯಾಕೆಂದರೆ ಕಾಲಕ್ರಮೇಣ ವ್ಯಕ್ತಿಯೊಬ್ಬ ಹೀಗೆ ಮಾಡಿದನು ಎಂದು ಹೇಳ ಹೆಸರಿಲ್ಲದಷ್ಟು ಬದಲಾವಣೆಯಾಗುವ ದಿನ ಈ ಕಷ್ಯಪಿಗೆ ಬಂದೇ ಬರುತ್ತದೆ ಎಂದು ಧೃಡವಾಗಿ ನಂಬಿರುವ ಋಣಾತ್ಮಕ ಚಿಂತಕರು - ಅವರನ್ನು ಉಗ್ರಗಾಮಿಗಳು ಎಂದರೂ ತಪ್ಪಿಲ್ಲ, ಶ್ರೀ ಕೃಷ್ಣನ ಭಗವದ್ಗೀತೆಯ ಸಾರ-ಸಂದೇಶವನ್ನೂ ತಮ್ಮ ಗುರಾಣಿಯಾಗಿ ಹಿಡಿಯಬಲ್ಲರು. ಜೀವನ ಪರ್ಯಂತ ಜೈಲುವಾಸ ಅನುಭವಿಸಿದರೂ, ಸೃಷ್ಟಿಯ ಕಾಲಮಾನದಲ್ಲಿ ಅದು ಕೇವಲ ೦.೦೦೦೦೦೦೦೦೦೦೦೦೧% ಎಂದೂ, ಅದ್ಯಾವ ವ್ಯತ್ಯಾಸವನ್ನು ತರಲಾಗದು ಎಂದು ತುಚ್ಚವಾಗಿ ಆಲೋಚಿಸುವಂಥವರು.


        ಇನ್ನು ಕೊನೆಯದಾಗಿ ಧನಾತ್ಮಕ ಚಿಂತಕರು, ಪ್ರಪಂಚಕ್ಕಿರುವುದು ಕೋಟಿ ವರ್ಷಗಳಾದರೂ, ನನಗಿರುವುದು ಕೇವಲ ೬೦-೭೦ ವರ್ಷ ಅನ್ನುವ ಕಟುಸತ್ಯ ಅರಿತು ಬದುಕನ್ನು ಪ್ರೀತಿಸುವವರು, ಇಷ್ಟರೊಳಗೆ ನನ್ನ ಪ್ರಪಂಚ, ನಾ ಪ್ರೀತಿಸುವ ಅಪ್ಪ-ಅಮ್ಮ, ಅಣ್ಣ-ತಂಗಿ, ಮಕ್ಕಳು ಹಾಗು ಬಂಧು-ಮಿತ್ರರು ಇರುವುದು, ಇರುವಷ್ಟು ದಿನ ಚನ್ನಾಗಿ ಬದುಕಿ, ನಾಲ್ಕು ಜನರಿಗೆ ಆದಷ್ಟು ಸಹಾಯ ಮಾಡಿ, ಜೀವನದಲ್ಲಿ ಏನಾದರು ಸಾಧಿಸಿ ಮುಂದಿನ ಪೀಳಿಗೆಗೆ ಕೊಡುಗೆಯೊಂದನ್ನು ನೀಡಬೇಕು ಎನ್ನುವ ಚಿಂತಕರು, ಇಂಥವರಿಂದಲೇ ಆವಿಷ್ಕಾರಗಳು ನಡೆಯಲು ಸಾಧ್ಯ , ಹೊಸ ತಿರುವು ಕಾಣಲು ಸಾಧ್ಯ, ಅದೇ ಕೃಷ್ಣ ಜನ್ಮಸ್ಥಳದ ಉದಾಹರಣೆಗೆ ಬರುವುದಾದರೆ, ಉರುಳುವ ಕಾಲಕ್ಕೆ ನನ್ನ ಆಯಸ್ಶು ೦.೦೦೦೦೦೦೦೦೦೦೦೦೧% ಆದರೆ, ನನಗೆ ನನ್ನ ಆಯಸ್ಸು ೧೦೦%, ಏನು ಮಾಡಿದರು ಈ ಜನ್ಮದ ಕಾಣಿಕೆಯಲ್ಲೇ ನನ್ನ ಲೋಕ ಎಂದು ಅರಿತಿರುವವರು.
        ಈ ಧನಾತ್ಮಕ ಚಿಂತನೆಗಳಲ್ಲೂ ಒಂದು ಸಣ್ಣ ತೊಡಕಿದೆ. ಕೆಲವೊಂದು ಪಾಸಿಟಿವ್ ಹೇಳಿಕೆಗಳು ಸರಿಯಿದ್ದರೂ ಅವನ್ನು ಯಾವಾಗಲೂ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಗುರುವರ್ಯರೊಬ್ಬರು ಹೇಳುತ್ತಾರೆ, "ಜೀವನದಲ್ಲಿ ಉಸಿರಾಡುತ್ತಿರುವುದೇ ಒಂದು ಆನಂದ, ನೀನು ಮತ್ತು ನಿನ್ನವರು ಬದುಕುಳಿದಿದ್ದಾರೆ ಎನ್ನುವುದೇ ಸಾಕು ಸಂಭ್ರಮಿಸಲು, ಸಂತೋಷವಾಗಿರಲು, ಇದಕ್ಕಿಂದ ಇನ್ನೇನು ಬೇಡ" ಎಂದು. ಇದು ಒಪ್ಪುವ ಮಾತು, ಸಂಶಯವೇ ಇಲ್ಲ, ಆದರೆ ಎಲ್ಲ ಸಂದರ್ಭದಲ್ಲೂ ಈ ಮಾತು ನಿಜವೇ? ನನ್ನ ಪ್ರಕಾರ ಸ್ಪೂರ್ತಿ ನೀಡುವ ಈ ವಚನ, ಬದುಕಲ್ಲಿ ಇನ್ನೇನು ಸೋತು ತಳಹದಿಗೆ ಬೀಳುವ ಸ್ತಿತಿಯಲ್ಲಿ ಉಪಯೋಗಕ್ಕೆ ಬರುತ್ತದೆಯೇ ಹೊರತು, ಏನಾದರೂ ಸಾಧಿಸಿ, ಬಾಳಿನಲ್ಲಿ ಉತ್ತುಂಗಕ್ಕೆ ಏರುವ ಪಥದಲ್ಲಿರುವವನಿಗಲ್ಲ. ಆಗ ಬೇಕಿರುವುದೇನಿದ್ದರು "ಅಸಾಧ್ಯವೆಂಬುದು ಯಾವುದೂ ಇಲ್ಲ, ನಡಿ ಮಗ ನಿನ್ನಿಂದ ಸಾಧ್ಯ ಇದು" ಎನ್ನುವ ಪ್ರೇರೇಪಣೆಗಳು. ಎರಡೂ ಮಾತುಗಳು ಬದುಕನ್ನು ಧನಾತ್ಮಕ ರೀತಿಯಲ್ಲಿ ಬದಲಾಯಿಸುತ್ತವೆಯಾದರೂ, ಪ್ರತಿಯೊಂದನ್ನು ಸ್ವೀಕರಿಸಲು ತನ್ನದೇ ಆದ ಸಮಯವಿದೆ. ಈ ಸಣ್ಣ ಗಂಟು ಅರ್ಥವಾಗದೆ ಕೆಲವರು, ಈ false-positive ಅಂದರೆ ಧನಾತ್ಮಕ-ಹುಸಿ ಬದುಕಿಗೆ ಒಗ್ಗಿಕೊಂಡುಬಿಡುತ್ತಾರೆ. ಕೆಳಗಿನ ರೋಗ ಪತ್ತೆ ವಿಧಾನದ ಚಿತ್ರ ಗಮನಿಸಿದರೆ ಹುಸಿ-ಧನಾತ್ಮಕ ಬದುಕು/ಸಂತೋಷ ಏನೆಂದು ತಿಳಿಯಬಹುದು.


        ಕೊನೆಯಲ್ಲಿ ಹೇಳಬಯಸುವುದೇನೆಂದರೆ, ದಿನಬೆಳಗಾದರೆ ಕಾಣುವ/ಕೇಳುವ ಎಲ್ಲಾ ವಿಷಯ, ಚಿತ್ರ, ಚಲನಚಿತ್ರ, ಹೇಳಿಕೆಗಳು, ಸನ್ನಿವೇಷಗಳು, ಏನಾದರೊಂದು ಸಂದೇಶ ಕೊಟ್ಟೇ ಕೊಡುತ್ತವೆ, ಅದನ್ನು ಹೇಗೆ ಅರ್ಥೈಸಿ ಸ್ವೀಕರಿಸಿ ಭವಿಷ್ಯವನ್ನು ಬರೆದುಕೊಳ್ಳುವುದೋ ನಮ್ಮ-ನಿಮ್ಮ ಕೈಯಲ್ಲಿದೆ, ನಿರಾಕರಣವಾದಿಗಳಾಗುತ್ತೀರೋ, ಋಣಾತ್ಮಕ, ಧನಾತ್ಮಕ, ಇಲ್ಲಾ false-positive ಆಗುತ್ತೀರೋ ನಿಮಗೆ ಬಿಟ್ಟ ವಿಚಾರ. ಸಾಧ್ಯವಾದಷ್ಟು ಎಲ್ಲವನ್ನು ಪಾಸಿಟಿವ್ ಆಗಿ ಅರ್ಥೈಸಲು ಪ್ರಯತ್ನಿಸೋಣ, ಮತ್ತು ಅರ್ಥಮಾಡಿಕೊಂಡ ತಾತ್ಪರ್ಯವನ್ನು ಸಮಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳೋಣ.ಈ ತೆಳು ನೀಲಿ ಚುಕ್ಕೆ ನಿಮ್ಮ ಜೀವನ ಇಷ್ಟೆ ನೋಡಿ ಎಂದೂ ಹೇಳುತ್ತದೆ ಹಾಗು ನಿಮ್ಮ ಜೀವನ ಇಷ್ಟೇ ಅಲ್ಲ, ಅದರಾಚೆಗೂ ಇಷ್ಟಿದೆ ನೋಡಿ ಅಂತಲೂ ಹೇಳುತ್ತದೆ, ಅದನ್ನು ಹೇಗೆ ತೆಗೆದುಕೊಳ್ಳುವುದು ಅವರವರ ಅಭಿರುಚಿಗೆ ಬಿಟ್ಟ ವಿಚಾರ 🙇🙇🙇

*** ಕಾಲಾಯ ತಸ್ಮೈ ನಮಃ ***

-ಭದ್ರ

3 comments: